ಇದು ನಾ ಬರೆದ ಮೊದಲ ಕವನ.. ೨೦೦೦ ಇಸ್ವಿ ಸಂಕ್ರಾಂತಿ ಹಿಂದಿನ ದಿನ ಮೂಡಿದ ಸಾಲುಗಳು …!
ಓ, ಕಾಲಪುರುಷನೇ ಬಂದೆಯಾ?
ಹಳೆಯ ಕಹಿಯ ಮರೆಸಲು ಸವಿ ಬಿಡಿಸುವೆಯಾ?
ಇಟ್ಟು ಹೋಯಿತು ಸಹಸ್ರ ಚುಕ್ಕಿಯ ಆ ಸಹಸ್ರಮಾನ!
ನೀ ಬಿಡುಸುವೆಯಾ ಇದರಲ್ಲೊಂದು ಸುಂದರ ಚಿತ್ತಾರವ?!
ಅದು ಕೊಟ್ಟಿತು, ಕಿತ್ತುಕೊಂಡಿತು ನೂರಾರು ದಿವ್ಯ ಚೇತನಗಳ!
ನೀನಿಂದು ಕೊಡಬಲ್ಲೆಯಾ? ಒಂದು ಅಮರ ಚೇತನ?
ಮುಚ್ಚಬಲ್ಲೆಯಾ ತೂತು ಮಡಿಕೆಯಾ?
ಕಟ್ಟಬಲ್ಲೆಯಾ, ನವ ಶಾಂತಿ ಸಾಮ್ರಾಜ್ಯವ?!
ಹಿಂದೆ ನಡೆದಿತ್ತು ಎಷ್ಟೋ ಅವಿಷ್ಕಾರ ಕ್ರಾಂತಿ!
ಆದರೇನು? ಕರಗಲಿಲ್ಲ ಅಂಧಕಾರ ಭ್ರಾಂತಿ;
ದೂರ ಸರಿಸುವೆಯಾ ಮನದಲ್ಲಿನ ಭೀತಿ!
ಎಂದು ನೀಡುವೇ ಸಕಲ ವಿಶ್ವಶಾಂತಿ?!
ಓ, ಬಾನ್ ಬೆಳಗುವ ಹೊಸ ನೇಸರನೇ.
ಕಾಣಿಸಲಿಲ್ಲವೇ ಈ ಗಾಢಾಂಧಕಾರ
ಕೇಳಿಸಲಿಲ್ಲವೇ ನನ್ನೀ ಮನದ ಇಂಗಿತ?
ಎಂದು ಬೆಳಗುವೆ ಈ ಹೃದಯದ ಅಂಕಿತ?!
ಓ, ನಿಶೆಯ ತಾರೆ ಶಶಿಯೇ.
ಎಷ್ಟು ಇರುಳ ಕಂಡಿರುವೆ ಈ ಭೂತಾಯಿಯ?
ಹೊತ್ತಿಕೊಂಡು ಉರಿಯುತ್ತಿವೆ ಹೃದಯಗಳು, ತಣಿಸಲಾರೆಯಾ?
ಮಾನವೀಯತೆಯ ರಕ್ಷಿಸಲು ಶಾಂತದೂತ ನೀನಾಗುವೆಯಾ?!..
ಎಷ್ಟು ಇರುಳ ಕಂಡಿರುವೆ ಈ ಭೂತಾಯಿಯ?
ಹೊತ್ತಿಕೊಂಡು ಉರಿಯುತ್ತಿವೆ ಹೃದಯಗಳು, ತಣಿಸಲಾರೆಯಾ?
ಮಾನವೀಯತೆಯ ರಕ್ಷಿಸಲು ಶಾಂತದೂತ ನೀನಾಗುವೆಯಾ?!..
