About ಅಶ್ವತ್ಥ್ (Ashwath)

ಸದ್ಯಕ್ಕೆ ಹೇಳಿಕೊಳ್ಳೋ ಅಂತ ದೊಡ್ಡ ಮನುಷ್ಯ ಅಲ್ಲ ! ಆದ್ರೆ ನನ್ನಲ್ಲಿ ಇರೋ ಕವಿಯಿಂದ ನಾನು ಏನಾದ್ರೂ ಆಗೇ ಆಗ್ತೀನಿ..!

ಓ, ಕಾಲಪುರುಷ !

ಇದು ನಾ ಬರೆದ ಮೊದಲ ಕವನ.. ೨೦೦೦ ಇಸ್ವಿ ಸಂಕ್ರಾಂತಿ ಹಿಂದಿನ ದಿನ ಮೂಡಿದ ಸಾಲುಗಳು …!
ಓ, ಕಾಲಪುರುಷನೇ ಬಂದೆಯಾ?
ಹಳೆಯ ಕಹಿಯ ಮರೆಸಲು ಸವಿ ಬಿಡಿಸುವೆಯಾ?
ಇಟ್ಟು ಹೋಯಿತು ಸಹಸ್ರ ಚುಕ್ಕಿಯ ಆ ಸಹಸ್ರಮಾನ!
ನೀ ಬಿಡಿಸುವೆಯಾ ಇದರಲ್ಲೊಂದು ಸುಂದರ ಚಿತ್ತಾರವ?!
ಅದು ಕೊಟ್ಟಿತು, ಕಿತ್ತುಕೊಂಡಿತು ನೂರಾರು ದಿವ್ಯ ಚೇತನಗಳ!
ನೀನಿಂದು ಕೊಡಬಲ್ಲೆಯಾ? ಒಂದು ಅಮರ ಚೇತನ?
ಮುಚ್ಚಬಲ್ಲೆಯಾ ತೂತು ಮಡಿಕೆಯಾ?
ಕಟ್ಟಬಲ್ಲೆಯಾ, ನವ ಶಾಂತಿ ಸಾಮ್ರಾಜ್ಯವ?!
ಹಿಂದೆ ನಡೆದಿತ್ತು ಎಷ್ಟೋ ಅವಿಷ್ಕಾರ ಕ್ರಾಂತಿ!
ಆದರೇನು? ಕರಗಲಿಲ್ಲ ಅಂಧಕಾರ ಭ್ರಾಂತಿ;
ದೂರ ಸರಿಸುವೆಯಾ ಮನದಲ್ಲಿನ ಭೀತಿ!
ಎಂದು ನೀಡುವೆ ಸಕಲ ವಿಶ್ವಶಾಂತಿ?!
ಓ, ಬಾನ್ ಬೆಳಗುವ ಹೊಸ ನೇಸರನೇ.
ಕಾಣಿಸಲಿಲ್ಲವೇ ಈ  ಗಾಢಾಂಧಕಾರ
ಕೇಳಿಸಲಿಲ್ಲವೇ ನನ್ನೀ ಮನದ ಇಂಗಿತ?
ಎಂದು ಬೆಳಗುವೆ ಈ ಹೃದಯದ ಅಂಕಿತ?!
ಓ, ನಿಶೆಯ ತಾರೆ ಶಶಿಯೇ.
ಎಷ್ಟು ಇರುಳ ಕಂಡಿರುವೆ ಈ ಭೂತಾಯಿಯ?
ಹೊತ್ತಿಕೊಂಡು ಉರಿಯುತ್ತಿವೆ ಹೃದಯಗಳು, ತಣಿಸಲಾರೆಯಾ?
ಮಾನವೀಯತೆಯ ರಕ್ಷಿಸಲು ಶಾಂತದೂತ ನೀನಾಗುವೆಯಾ?!..

ಚಿಲುಮೆ

ಹರಿದ ಹೃದಯದಲ್ಲಿ,
ಹೊಸದಾಗಿ ಚಿಲುಮೆ ಉಕ್ಕಿದೆ.
ಪೋಲಾಗಲು ಬಿಡದೆ ಪಾತಿ ಕಟ್ಟುವೆ!
ಇರುವ ಜಾಗದಲ್ಲಿ ಹೂದೋಟ ಮಾಡುವೆ,
ಪ್ರೀತಿಯ ಗೊಬ್ಬರ ಹಾಕಿ ಕಾಪಾಡುವೆ!

ಕಪ್ಪಾದರೆ ಕಂಪಿಸುವೆ…
ಕಂಪು ಸೂಸಲು ತಂಪಾಗುವೆ.
ಹೂವಾಗಲಿ, ಫಲವಾಗಲಿ,
ನನಗೆ ಸೇರಬೇಕೆಂದಿಲ್ಲ!

ನಾನೆಂಬ ಅಡುಗೆ ಭಟ್ಟ …

 

ನಾನೆಂಬ ಅಡುಗೆ ಭಟ್ಟ …
ತಯಾರಿಸುವ ಬಗೆಬಗೆ ಭಕ್ಷ್ಯಗಳ …
ಮಾಡುವ ವಿಧಾನ ಆದರೂ ನಿಧಾನ, ಬಲು ರುಚಿಕರ!
ತೋಚಿದಾಗ ಮಾತ್ರ ಅಡುಗೆ ಮಾಡುವ ಹುಚ್ಚು ಭಟ್ಟ.

ಉಕ್ಕುವ ಹಾಲ್ಭಾವನೆಗಳಿಂದ ಖ್ಹೋವಾ ತಯಾರಿಸುವ
ಹಾ…! ನಿಜ ಇವನೊಬ್ಬ ಕವಿ ..!
ಕವಿಯಾದರೇನೂ, ಇವ ನಳ ಮಹಾರಾಜ ..
ಎಂದೂ ಕೆಡದ ಹಾಗೆ ಬೇಯಿಸುವ ಪಾಕ ಪ್ರವೀಣ!

ಭಾವನೆಗಳು ಯಾವಾಗ ಉಕ್ಕುವುದೋ ತಿಳಿದಿಲ್ಲ
ಉಕ್ಕಿದಾಗ ಬೇಕು ಲೇಖನಿ, ಹಾಳೆ ..
ಕಡಿಮೆಯಾಗುವುದು ಬೇಡ ಶಾಖ,
ಉಕ್ಕುವ ಭಾವನೆ, ಸ್ವಲ್ಪ ಸೀದ ಕನಸುಗಳ ಅಡುಗೆ!

ರುಚಿಯೋ ಆಹಾ ವೈವಿಧ್ಯಮಯ!
ಕೆಲವು ಸಿಹಿ, ಕೆಲವು ಖಾರ
ಕೆಲವು ಉಪ್ಪು, ಹುಳಿ … ಅಥವಾ ಎಲ್ಲಾದರ ಮಿಶ್ರಣ!!
ಯಾವುದೋ ಒಂದೊಂದು ಮಾತ್ರ ಒಗರು ..!

ಇಬ್ಬನಿಯಾದರೆ ನಾನು ….

ಓ ಕಾಣದ ದೇವನೇ ನೀನಿರುವೆಯಾ?!

ಕರುಣಿಸುವೆಯಾ ನನಗೆ ಚಿಕ್ಕ ವರವೊಂದ?!

ಭಯಪಡಬೇಡ ರಕ್ತಬೀಜಾಸುರನಲ್ಲ ನಾನು

ಮಾಡುವೆಯಾ ನನ್ನ ಚಿಕ್ಕದೊಂದು ಬಿಂದು?

ಆಗ ಕರೆಯವರು ಎಲ್ಲಾ ನನ್ನ ಇಬ್ಬನಿಯೆಂದು …

ಅದರಲ್ಲೇ ಆನಂದ ನನಗೆ ಎಂದೆಂದೂ …!!

ಬೆಳಕು ಹರಿದರೆ ಹೂವಲ್ಲಿ ನಾನಿರುವೆ.

ನೀಡುವೆ ರಕ್ಷೆ ಸೂರ್ಯ ರಷ್ಮಿಗಳಿಂದ,

ಸ್ವಚ್ಛ ನಿಸ್ವಾರ್ಥ ಪ್ರೀತಿಯಿಂದ.

ಎಷ್ಟಾದರೂ ಮೃದುವಾದ ಹೂವಾದು.

ಕಿತ್ತರೆ ದೇವರ ಮುಡಿಗೋ,

ಅಥವಾ ಹೆಣ್ಣಿನ ಜಡೆಗೋ?!

ಉದುರಿದರೆ ಆಗುವುದು ಗೊಬ್ಬರ,

ಅಲ್ಲೇ ಇದ್ದಾರೆ ಅದು ಅಮೃತ ಫಲ!!

ಅರೆ, ಕೇಳಿಬರುವುದು ಕೂಗೊಂದು!

ಮಣ್ಣ ಮಗನ ಕೂಗದು.

ಹಾರುವೆ ನಾನಾಗಲೇ ಆಗಸಕ್ಕೆ

ಬೀಡುವೆ ನಾ ಮೊಡದಲ್ಲಿ ಬೀಡು.

ಸ್ನೇಹಿತರನ್ನೊಡಗೂಡಿ  ಧರೆಗಿಳಿವೆ.

ಮಳೆಯಾಗಿ ಹೊಸ ಕಳೆ ತರುವೆ.

ನಾ ಬಿದ್ದರೆ ಕುಣಿಯುವುದು ನವಿಲು,

ಚಿಗುರುವುದು ಪೈರು,

ಹಾಡುವುದು ಹಕ್ಕಿಯು

ನಲಿನಲಿಯುವುದು ಜೀವ ಸಂಕುಲವು … !!

ಅರೆ! ಇದಕ್ಕಿಂತ ಇನ್ನೇನು ಬೇಕು?

ಧನ್ಯತೆಯ ಪರಮಾವಾಧಿಯದು!

ಇಬ್ಬನಿಯಾದರೆ ನಾನು …..

ಲಬ್ ಡಬ್

ಮನದ ಗೋಡೆಯಲ್ಲಿ, ನೇತುಹಾಕಿದ ಗಡಿಯಾರದಲ್ಲಿ

ಲಬ್ ಡಬ್ ಲಬ್ ಡಬ್ ….

ಹೇಗೋ ನಡೆಯತ್ತಿದೆ ಕಾಲ …

ನಡುಗುವ ಭಯ ಬಿಟ್ಟಾಗಿದೆ …

ಗೋಡೆ ಈಗ ಭದ್ರವಾಗಿದೆ ….

ನಾಲ್ಕು ಕೊಣೆಗಳಲ್ಲಿ ನಾನೂರು ನೆನೆಪುಗಳು ….

ಕೆಲವು ಚೂರಾಗಿವೆ .. ಕೆಲವು ಧೂಳು ಹಿಡಿದಿದೆ …!!

ಕೆಲವು ಗಡಿಪಾರಾಗಿದೆ …

ಮತ್ತೆ ಕೆಲವು ಮುತ್ತಾಗಿ ಉಳಿದಿವೆ …!!

ವಿಶಾಲ ಪರದೆಯಿದೆ …  ದಿನಕ್ಕೊಂದು ಆಟ

ಎಲ್ಲಾ ಸುಂದರ ಚಿತ್ರಗಳು …

ನೆಮ್ಮದಿಯಾಗಿ ಬದುಕುವೆ ಇಲ್ಲೇ ಕನಸು ಹೆಣೆಯುತ್ತಾ ….

ಹೊತ್ತಾಗಿದೆ ನನಸು ಮಾಡಲು ..

ಲಬ್ ಡಬ್ ಲಬ್ ಡಬ್ ….

ಬದಲಾಗುತ್ತಿದೆ !

 

ಎಷ್ಟೋ ದಿನಗಳಿಂದ ಅಲೆಗಳ ಅಬ್ಬರ
ಕಟ್ಟುವಷ್ಟರಲ್ಲೇ ಕನಸುಗಳು ತತ್ತರ !
ಕ್ಷಣದಲ್ಲೇ ಕೊಚ್ಚಿಹೋದ ಮಧುರ ಭಾವ ,
ಬೇಕೆನಿಸಿದರು ಆವರಿಸದ ಮೌನ !!

ಒಂದರ ಹಿಂದೊಂದು ಸಾಲು ಸಾಲು
ಆಗಿದ್ದೆಲ್ಲಾ ಒಳ್ಳೆಯದಕ್ಕೆ ಪಟ್ಟ ಪಾಡು !
ಅಯ್ಯೋ ಗಲಿಬಿಲಿ ಗಿಜಿಬಿಜಿ ಬದುಕು
ಬದುಕಲ್ಲ ನನ್ನ ನಾ ಅರಿತ ಬವಣೆಯದು !!

ಅಲೆಗಳು ಶೂನ್ಯವಾದ ಆ ದಿನ,
ದೂರದ ಮಿಥ್ಯ ಅನುರಾಗ ಭಾವ !
ಈಗ ಬದಲಾಗುತ್ತಿದೆ ಬಾಳು ….
ಬೇಡದ ಭಾವಗಳಿಂದು ಹಾಳು !!

ಕವಿಯಾದೆ ನಾನು..!!

ಸೂಜಿ ಕಣ್ಣ ಹುಡುಕುವ ಹಾಗೆ
ಹುಡುಕಿದೆ ನಾ ಗೆಳತಿಗೆ !
ಕಂಡಳೊಮ್ಮೆ ಕನಸ ಕನ್ಯೆ
ನನ್ನ ಮನದ ಅಪ್ಸರೆ..!

ಉಕ್ಕಿತೊಮ್ಮೆ ಮನದ ಕಡಲು
ಆ ಚಂದ್ರ ಕಾಂತಿಗೆ !
ಮಾತು ಮರೆತು ಮೂಗನಾದೆ
ಆ ಮೌನ ರಾಗ ಸ್ವರದಲೇ !

ವಾಸ್ತವ ಮರೆತು , ಅರಿವು ಹೋಗಿ
ಭಾವಲೋಕ ಕಂಡೆನಾ !
ನಿದ್ದೆ ಗಿದ್ದೆ ಏಕೆ ಬೇಕು ?
ಅವಳ ದೃಶ್ಯ ಮಾತ್ರ ಸಾಕು!

ಅವಳ ನಗುವೆ ಬರೆದ ಪಲ್ಲವಿಗೆ ,
ಎಂದೂ ಮುಗಿಯದ ಕವಿತೆಗೆ ,
ಅವಳೇ ಸ್ಪೂರ್ತಿಯಾದ ಸಾಲುಗಳಿಗೆ
ಕವಿಯಾದೆ ನಾನು..!!

ಮನ ಮೆಚ್ಚಿದ ಸುಳ್ಳು …!

http://artoflivingtoday.com/wp-content/uploads/2009/05/sadpainting2.jpg

ನೀ ನನ್ನ ನಗಿಸಿದಾಗ
ಬಂದ ಕೆನ್ನೆ ಗುಳಿಗಳು …

ನೀ ಹೊರಟಾಗ ತುಂಬಿತು
ನೆನಪುಗಳ ಪ್ರವಾಹದಿಂದ..!!
ನೀ ಹೇಳಿದೆ ಸಾವಿರ ಸುಳ್ಳು .
ಗೊತ್ತಿದ್ದರೂ ಸುಮ್ಮನಿದ್ದ ನಾನು,
ಮನಸಾರೆ ಮೆಚ್ಚಿದ
ಕೊನೆಯ ಸುಳ್ಳು …..
`ನೀ ನನ್ನ ಪ್ರೀತಿಸುವೆ’ ಎಂದದ್ದು !
ಮೋಹಭರಿತ ಸುಳ್ಳದು …
ಆಗಾಗ ಕಾಡುತಿದೆ ಕವಿಯಾಗಲೆಂದು !

ಕಳೆದ ಮುತ್ತು ….?!

ಚೂರಾಯ್ತು ಹೃದಯದ ಚಿಪ್ಪು,
ಕಳೆದು ಹೋಯ್ತು ಪ್ರೀತಿಯ ಮುತ್ತು.
ದೂರವಾದ ಪ್ರೀತಿಯದು ಇನ್ನ್ಯಾರದೋ ಸ್ವತ್ತು !

ನಾ ಬರೆದ ಕವನಗಳೆಲ್ಲಾ,
ಬರೀ ನೆನಪುಗಳ ಚರಿತ್ರೆಯಾಯ್ತು ,
ಪ್ರತಿ ಸಾಲೂ ನನ್ನ ಈಗ ದೂಷಿಸುತ್ತಿರಲು .

ಕಮರಿಹೋದ ನನ್ನ ಕನಸಿನ ಹೂಗಳು,
ಅರಳಲಿ ಅವಳ ಬಾಳಲಿ ಎಂದೆಂದೂ ,
ಆಶಿಸುವೆ ಅವು ಸದಾ ನಗುತಿರಲೆಂದು

ಚೂರಾದ ಚಿಪ್ಪಿನಲಿ,
ಉಸಿರಾಡುವ ಪ್ರೇಮಿ ನಾನು .
ಕಾಡುತ್ತಿದೆ ಇನ್ನೊಂದು ಮಳೆಯ ಭಯವು !

ಪ್ರೀತಿಗಾಗಿ……. !

ಕಟ್ಟಿಕೊಂಡ ಕನಸು ಕೆಸರಲ್ಲಿ ಬೀಳಲಿ ,
ಕೆಂದಾವರೆಯಾಗಿ ಅರಳಿಸುವೆ ಪ್ರೀತಿ..
ಬಾಡಿಹೋಗಲಿ ಉರಿಬಿಸಿಲಲ್ಲಿ ಬೆಂದು ,
ಉಸಿರು ತುಂಬಿ ಅರಳಿಸುವೆ ಪ್ರೀತಿ..!

ಮುಳುಗಿ ಹೋಗಲಿ ಜಲಪ್ರಳಯದಿ ,
ವರಾಹಾವತಾರವನ್ನೆತ್ತಿ ಉಳಿಸುವೆ ಪ್ರೀತಿ .
ಎದುರು ಬರುವ ಕಂಟಕರು ಯಾರೇ ಇರಲಿ ,
ಕತ್ತಿ ಹಿಡಿದು ಉಳಿಸುವೆ ಪ್ರೀತಿ…!

ಸಾವಿರ ಲೋಕದ ಸ್ವಪ್ನ ಸುಂದರ ಪ್ರೀತಿ,
ಸಾವಿರ ಜನ್ಮಕ್ಕೂ ಅರ್ಥವೇ ಪ್ರೀತಿ ,
ಕಾಲ ದೇಶಗಳ ಎಲ್ಲೆಯಿಲ್ಲದ ಪ್ರೀತಿ ,
ನಿನಗಾಗಿಯೇ ನಾನೆಂದೂ ಬದುಕುತಿ..!