ನಮ್ ಬೆಂಗ್ಳೂರು

Image

ಕೆಂಪಿಟ್ಟಿಗೆಗಳಿಂದ ಕೆಂಪೇಗೌಡರು ಕಟ್ಟಿದ ಹಟ್ಟಿಗಳಿಂದಿಲ್ಲ!
ಆದರೂ, ಈ ಕಾಂಕ್ರೀಟು ಕಾಡಿನಲ್ಲಿ, ದಟ್ಟ ಹೊಗೆಯ ಮರೆಯಲ್ಲಿ
ಇಲ್ಲೆಲ್ಲೋ ಇನ್ನೂ ಇವೇ ಪಾಳು ಬಿದ್ದ ಅದೇ ಹಟ್ಟಿಗಳು!
ಸಾಲು ಬದಿಯ ಮರಗಳಿಲ್ಲ, ಹೊಂಡಗಳಿಲ್ಲದ ರಸ್ತೆಗಳಿಲ್ಲ!
ಬೆಂದಕಾಳೂರಲ್ಲ ಈಗಿದು ‘ನಮ್ ಬೆಂಗ್ಳೂರು’

ಪುಡಿಗಾಸಿಗಾಗಿ ಪುಡಿ ಪುಡಿಯಾದ ಮೂಳೆಗಳಿವೆ ಇಲ್ಲಿ!
ಪ್ರೀತಿ ಕಾಣದ ಅಮಾಯಕ ಸಾವಿರ ಕಂಗಳಿವೆ ಇಲ್ಲಿ!
ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ….. ರಿಲ್ಲದ ಊರಿದು!
ಡ್ಯಾಡಿ, ಮಮ್ಮಿ, ಅಂಕಲ್, ಆಂಟಿ…..ಗಳ ಅಪರಿಚಿತ ಊರಿದು!
ಅ, ಆ, ಇ, ಈ ಕಾಣಸಿಗದ ಊರಿದು ‘ನಮ್ ಬೆಂಗ್ಳೂರು’

ಬೆಳಗಾಗುವುದಿಲ್ಲಿ ಕೋಳಿ ಕೂಗಿನಿಂದಂತೂ ಅಲ್ಲ!
ಹಾಲುಡುಗನ ಕೋಗಿನಿಂದಲೋ ಅಥವಾ ಅಲಾರಮ್ಮಿನಿಂದಲೋ?
ನಮಸ್ಕಾರದ ಆದರದ ನಗೆಯೆಂದೋ ಹೊರಟು ಹೋಯಿತು …
‘ಹಾಯ್’, ‘ಬಾಯ್’ ಗಳ ಕೃತಕ ನಗೆ ಬೆಳಕಿನ ಹಿಂದೆ!
‘ಸಾರಿ’, ‘ಎಕ್ಸ್ ಕ್ಯೂಸ್ ಮೀ’ ಗಳ ಊರಿದು ‘ನಮ್ ಬೆಂಗ್ಳೂರು’

ಪ್ರತಿದಿನವೂ ಓಕುಳಿಯಾಟ ನಡೆಯುವುದಿಲ್ಲಿ!
ಕೃತಕ ರಂಗಿನಿದಲ್ಲ, ಜೀವಂತ ಓಕುಳಿಯಿಂದ!
ಪ್ರತಿದಿನ ಎಷ್ಟೋ ಮನೆಗಳೆದುರು ಹೊಗೆಯಾಡುವುದಿಲ್ಲಿ.
ಜಗಳದ ಕಟ್ಟಿಗೆಗಳಿಗೆ, ದ್ವೇಷದ ಬೆಂಕಿ ಹಚ್ಚುವರಿಲ್ಲಿ..
‘ತನ್ನತನ’ ಮೆರೆಯುತ್ತಿರುವ ಊರಿದು ‘ನಮ್ ಬೆಂಗ್ಳೂರು’

ಬಂಗಲೆಯೊಳಗಿನ ಬಿಂಕದ ಮಾತುಗಳು, ವ್ಯರ್ಥವಾಗುವ ತಿಂಡಿಗಳು,
ಇಲ್ಲೇ ಎಲ್ಲೋ ಕೊಳಗೇರಿಯಲ್ಲಿ ಹಸಿದು ನರಳುವ ಹೊಟ್ಟೆಗಳು!
ಎದೆ ಹಾಲು ಕುಡಿಯದ, ತಾಯ್ತಂದೆ ಪ್ರೀತಿ ಕಾಣದ ಮಕ್ಕಳಿವೆಯಿಲ್ಲಿ!
ಲಕ್ಷ ಮಂದಿಯಿದ್ದರೇನು? ನಿಮಿಷ ಸಮಯವಿಲ್ಲ ಯಾರಿಗೂ!
ಬರೀ ಅನಾಥರಂತಿರುವ ಊರಿದು ‘ನಮ್ ಬೆಂಗ್ಳೂರು’

2 thoughts on “ನಮ್ ಬೆಂಗ್ಳೂರು

ನಿಮ್ಮ ಟಿಪ್ಪಣಿ ಬರೆಯಿರಿ